Wednesday 30 October 2013

ವ್ಯಾನಿಟಿ ಬ್ಯಾಗು..

ವ್ಯಾನಿಟಿ ಬ್ಯಾಗಿನಲ್ಲಿ ಏನೇನು ಇರಬಹುದು ಇಣುಕಿ ನೋಡದಿರಿ ಗಂಡಸರೇ..!! ಹಿಂಗನ್ನುವ ಹಾಡಿನಿಂದಲೇ ಶುರುವಾದ ನಾಟಕ ಅರೆರೆ ಅಂಥದ್ದೆನಿರಬಹುದು ನಾವು ನೋಡ ಕೂಡದ್ದು ಆ ವ್ಯಾನಿಟಿ ಬ್ಯಾಗಿನೊಳಗೆ ಅನ್ನುವ ಕುತೂಹಲವನ್ನ ಹುಟ್ಟಿಸಿಕೊಂಡು ಕಣ್ಣುಗಳನ್ನ ಮತ್ತಷ್ಟು ಅಗಲಿಸುತ್ತಾ ಹೋಯ್ತು.

ದಸರಾ ನೋ ದೀಪಾವಳಿ ನೋ.. ಸಿಕ್ಕ ಬೋನಸ್ಸು ಮತ್ತು ಎಕ್ಸ್ ಕ್ರೀಶಿಯ ಗಳ ಲೆಕ್ಖದ ಮೇಲೆ.. ಹಬ್ಬದ ಶಾಪಿಂಗ್ ಗೆ ಅಂತ ಹೋಗೋ ನಾವು ಹೆಣ್ಮಕ್ಕಳು ಆಸೆ ಪಟ್ರು ಅಂತ ಒಂದೊಳ್ಳೆ ಚೆಂದದ ವ್ಯಾನಿಟಿ ಬ್ಯಾಗನ್ನೇನೋ ಕೊಡಿಸಿ ಬಿಡಬಹುದು.. ಆದರೆ ಆ ನಂತರದಲ್ಲಿ ಆ ವ್ಯಾನಿಟಿ ಬ್ಯಾಗಿನೊಳಗೊಂದು ಅದೆಂಥ ಅದ್ಭುತ ಲೋಕವನ್ನ ಹೊಂದಿರುತ್ತಾರೆ ಈ ಹೆಣ್ಣು ಮಕ್ಕಳು ಅನ್ನೋ ವಿಚಾರಕ್ಕೆ ಅಚ್ಚರಿಯ ಜೊತೆಗೆ ಅಸೂಯೆಯೂ ಆಯ್ತು. ಹಾಗೆ ಅಸೂಯೆ ಪಡುವಂತೆ ಮಾಡಿದ್ದು ನಿನ್ನೆಯ ವ್ಯಾನಿಟಿ ಬ್ಯಾಗಿನ ದರ್ಶನ.

ಜೋಳಿಗೆಯ ಹಾಗಿನ ಬ್ಯಾಗ್ ಒಂದನ್ನ ಹೆಗಲಿಗೆ.. ಬಗಲಿಗೆ ತಗುಲಾಕಿಕೊಂಡೆ ಓಡಾಡುವ ಅಸಂಖ್ಯ ಗಂಡು ಮಕ್ಕಳನ್ನ ಕೂಡಾ ನಾವು ಕಾಣ ಬಹುದಾದರೂ ಈ ವ್ಯಾನಿಟಿ ಬ್ಯಾಗಿನೊಳಗಿನಷ್ಟು ದೊಡ್ಡ ಪ್ರಪಂಚ ಬಹುಷಃ ಆ ಜೋಳಿಗೆಯೊಳಗೆ ಇರಲಾರದು. ನಮಗೋ ಇದ್ದರೆ ಎರಡು ಪುಸ್ತಕ.. ಕನ್ನಡಕದ ಸೂಟ್ ಕೇಸು.. ಹಳೆಯ ಡೈರಿ.. ಅರ್ಧ ಖಾಲಿಯಾದ ನೀರಿನ ಬಾಟಲಿ.. ಎರಡೋ ಮೂರೋ ಸಿಗರೆಟ್ ಉಳ್ಳ ಪ್ಯಾಕೆಟ್.. ಒಂದೆರಡು ಮಾತ್ರೆ.. ಆಪ್ತರ ಎರಡು ಫೋಟೋ.. ಎರಡ್ಮೂರು ಮುರುಕು ಪೆನ್ನುಗಳ ಹೊರತಾಗಿ ಬೇರೆ ಏನನ್ನಾದರೂ ಇರಿಸಿ ಕೊಳ್ಳೋ ಜಾಯಮಾನವೂ ಹುಡುಗರದ್ದಲ್ಲ. ಆದರೆ ವ್ಯಾನಿಟಿ ಬ್ಯಾಗಿನೊಳಗಿನ ಹೆಣ್ಣು ಮಕ್ಕಳ ಪ್ರಪಂಚ ಮತ್ತೊಂದು ಬ್ರಹ್ಮಾಂಡ. 

ಚೆಂದದ ಹುಡುಗೀರು.. ಅಂದದ ಹುಡುಗರು ಅವರಿಗೆಲ್ಲ ಸಾರಥಿಯಂತೆ ನಡುವಯಸ್ಸಿನ ಹೆಣ್ಣು ಮಗಳೊಬ್ಬರು.. ವೈದೇಹಿಯವರ ಅಷ್ಟು ಕವನಗಳನ್ನ ನಿರರ್ಗಳವಾಗಿ ಕಂಠ ಪಾಠಮಾಡಿ ಸುಶ್ರಾವ ಕಂಠದಲಿ ಒಕ್ಕೊರಲಿನಿಂದ ಆ ರಂಗಗೀತೆಗಳು ಈಗಲೂ ಕಿವಿಯಲ್ಲಿ ಗುಯ್ ಗುಡುವಷ್ಟು ಸುಶ್ರಾವ್ಯವಾಗಿ ಹಾಡಿ ಆಡುತ್ತ ನಾಟಕವನ್ನ ಮತ್ತಷ್ಟೂ ಹತ್ತಿರವಾಗಿಸಿದರು. ಒಂದೊಂದು ಮಣಿಯೂ ಸೇರಿ ಅಷ್ಟು ಚೆಂದಗೆ ಕಾಣುವ ಸುಂದರ ಮಣಿ ಹಾರದಂತೆ.. ಒಬ್ಬೊಬರ ದನಿಯೂ ಮಿಳಿತವಾಗಿ ರಂಗಗೀತೆಗಳು ಅಷ್ಟು ಚೆಂದಗೆ ಮೈದಳೆದಿದ್ದವು.

ಹಾಸ್ಯ.. ಲಾಸ್ಯ.. ಲಜ್ಜೆ.. ವಿನೋದ.. ನೋವು.. ನಲಿವು.. ವಿರಹ.. ಸರಸ.. ಆತುರ.. ಕಾತುರ.. ದುಗುಡ.. ದುಮ್ಮಾನ.. ಕನಸು.. ಕಲ್ಪನೆ.. ಕಾಯುವಿಕೆ.. ಧೇನಿಸುವಿಕೆ.. ಪ್ರೇಮಿಸುವಿಕೆ.. ರಮಿಸುವಿಕೆ.. ಓಲೈಸುವಿಕೆ.. ಆರೈಕಿಸುವಿಕೆ.. ಅಬ್ಬಾ ಇವನ್ನೆಲ್ಲಾ ಒಳಗೊಂಡಂತೆ ಮತ್ತೂ ಅದೆಷ್ಟು ಭಾವಗಳನ್ನ ಮುಖದೊಳಗೆ.. ಅಭಿನಯದೊಳಗೆ ಅದೆಷ್ಟು ಸಹಜವೆಂಬಂತೆ ತೋರಿಸಿ ಬಿಟ್ಟರು ಅವರೆಲ್ಲ. ಅವರುಗಳ ಆಟವನ್ನ ಮೆಚ್ಚದೆ ಉಳಿಯಲು ಸಾಧ್ಯವೇ ಇಲ್ಲ ಅನ್ನುವ ಶಾಸನ ಬರೆಸಿಡಬಹುದು ಅನ್ನುವಂಥ ವಿಶ್ವಾಸದ ನುಡಿಗಳನ್ನ ಯಾರ ಮುಂದಾದರೂ ನಂಬಿ ನುಡಿಯಬಹುದಾದಂಥ  ಮನಸ್ಥಿತಿಯನ್ನ ತಂದೊಡ್ಡಿ ಬಿಟ್ಟರು.

ಒಂದುಕಡೆ ದೃಶ್ಯ ಸಿರಿ.. ಮತ್ತೊಂದು ಕಡೆ ಶ್ರಾವ್ಯ ಸಿರಿ.. ಇವೆರಡೂ ಸೇರಿದ ಇದೇ ನಾಟಕ ಒಟ್ಟಾರೆ ಐಸಿರಿ. ಆ ಕವನಗಳನ್ನ ಬರಿಯ ಹಾಳೆಗಳ ಮೇಲೆ ಓದಿಕೊಳ್ಳುವಾಗ ಅದೇನು ಮಹಾ.. ಅದೇನು ಕವನ ಅನಿಸಬಹುದು.. ಕೆಲವು ಕವನಗಳು ಅನಿಸಿದ್ದೂ ಇದೆ. ಆದರೆ ನಾಟಕದೊಳಗೆ ಸಂಧರ್ಭಕ್ಕನುಸಾರವಾಗಿ, ಇಂಪಾದ ರಾಗದೊಂದಿಗೆ ಅವು ಹೊರಬರುವಾಗ ಆ ಸನ್ನಿವೇಶದ ಸೂಕ್ಷ್ಮತೆಯನ್ನ ಎಷ್ಟು ಸರಳವಾಗಿ ಪರಿಚಯಿಸ್ತಾ ಹೋಗ್ತಿದೆಯಲ್ಲ ಈ ಕವನಗಳು ಅನ್ನಿಸುತ್ತವೆ. ಪ್ರಥಮ ಪೀಯೂಸಿ ಓದುವಾಗ ಇದ್ದ ಅಡುಗೆ ಮನೆಯ ಹುಡುಗಿ ಕವನ ಅಲ್ಲಿ ನೀರಸವೆನಿಸಿ ಇಲ್ಲಿ ಆಪ್ತವಾಗಿದ್ದೇ ಬೇರೆ ತರಹ. ಅಷ್ಟಕ್ಕೇ ಅಷ್ಟೂ ಕವನಗಳು ಇಷ್ಟವಾಗುತ್ತವೆ.. ಆಪ್ತವಾಗುತ್ತವೆ. ಗಂಗೆ ಗೌರಿಯರ ಕಾಲದಿಂದ.. ರಾಜ ಮಹಾರಾಜರುಗಳಿದ್ದ ಕಾಲದಿಂದ.. ಆದಿಕಾಲದ ಘಟ್ಟದಿಂದ.. ಪ್ರಸ್ತುತ ಜಗತ್ತಿನ ಹೆಣ್ಣುಮಕ್ಕಳ ಪ್ರಪಂಚದ ಸಣ್ಣ ವಿಶ್ವರೂಪ ಈ ವ್ಯಾನಿಟಿ ಬ್ಯಾಗು ಅನ್ನಬೇಕು. ಆ ವಿಶ್ವರೂಪವನ್ನ ಮತ್ತೂ ಅದ್ಭುತವೆಂಬಂತೆ ಕಾಣಿಸಿ ಕೊಟ್ಟದ್ದು ಎಲ್ಲರ ಲವಲವಿಕೆಯ ಮತ್ತು ಮನೋಜ್ಞ ಅಭಿನಯ. 

ಕೆಲವೊಂದು ಸನ್ನಿವೇಶಗಳು.. ಕೆಲವೊಂದು ಸಾಲುಗಳು ಮನಸ್ಸಿನೊಳಗೆ ಹಾಗೆ ಅಚ್ಚುಹಾಕಿ ಕೂತು ಬಿಟ್ವು. 

* ಮೂರ್ ಜಗವ ಸುತ್ತಿ ದಣಿದು ಬಂದ ಶಿವನ ಒಲಿಸಿ ಕಾಲೊತ್ತುವ ನೆಪದಲ್ಲಿ ಶಿವನ ಕಾಲ್ ಧೂಳ ಮುಟ್ಟಿ.. ಯಾರ ಮನೆ ಹೊಸ್ತಿಲ ತುಳಿದು ಬಂದಿರಬಹುದು ಇವನು ಎನ್ನುವ ತುಂಟ ಸಂಶಯವನ್ನಿಟ್ಟುಕೊಂಡು ಅವನನ್ನ ಸ್ನಾನ ಮಾಡಿಸುವಾಗ ಗೌರಿಯಾಡುವ ಕೊಂಕಿನ ನುಡಿಗಳು.

* ಮನೆಯ ಹೊಸ್ತಿಲೂ ದಾಟದ ಅಮ್ಮ ಈಗ ದಾರಿಯಿಲ್ಲದ ದಾರಿಯನು ಅರಸಿ ಹೊರಟಿದ್ದಾಳೆ.. ಅಮ್ಮನಿಗೆ ಮುಕ್ತಿ ಸಿಗಬಾರದು ಭೂಮಿ ಬರಡಾಗುತ್ತದೆ.. ಅಮ್ಮ ಮತ್ತೆ ಹುಟ್ಟಿ ಬರಬಾರದು ಸ್ವರ್ಗ ಬರಡಾಗುತ್ತದೆ ಎನ್ನುವ ಸೂಪರ್ ಸಾಲುಗಳ ದೃಶ್ಯ.

* ಸ್ವಯಂ ವರದಲಿ ತನಗಿಷ್ಟವಾಗುವ ಹಾಗಿನ ರಾಜಕುಮಾರನ ಕುರಿತಾಗಿ ರಾಜಕುಮಾರಿ ಆಡುವ ಸ್ವಗತಗಳು.. ಕಡೆಗೆ ನಾನು ಅಮ್ಮನಂತಾಗಲಾರೆ ಅನ್ನುವ ಅವಳ ಸ್ವಾಭಿಮಾನ.

* ಮದುವೆ ಮನೆ ಸಂಭ್ರಮ.. ಸರಸ.. ಸಲ್ಲಾಪ.. ನಾದಿನಿಯರ ಕನಸು ಚೆಲ್ಲಾಟ.. ಗಂಡ ಹೆಂಡಿರ ಸರಸ ಸಲ್ಲಾಪದ ಬದುಕು ಕೊನೆ ಕೊನೆಗೆ ಹೇಗೆ ಬದಲಾಗಿಬಿಡುವ ಅವರ ವ್ಯಥೆಯ ಬದುಕು.

* ಅಡುಗೆ ಮನೆ ಹುಡುಗಿಯ ಕನಸುಗಳು.. ಕನವರಿಕೆಗಳು..

* ಸೂರ್ಯನನ್ನ ಪ್ರೀತಿಸುವ ಹುಡುಗಿ.. ಅವನ್ನನ ಕಂಡು ದೃಷ್ಟಿ ಸುಟ್ಟು ಕೊಂಡಳು.. ಮನಸಿತ್ತು ದೇಹ ಸುಟ್ಟು ಕೊಂಡಳು.. ಅವನ್ನ ಕೂಗಿ ಕರೆದು ಉಸಿರ ಸುಟ್ಟು ಕೊಂಡಳು.. ಕೊನೆಗೆ ಯಾವ ಆಮಿಷಕ್ಕೂ ಒಳಗಾಗದೆ ನಿರಂತರ ಅವನನ್ನು ಪ್ರೀತಿಸುತ್ತಾ.. ಬ್ರಹ್ಮಾಂಡಕ್ಕಿಂತ ಅವನ ಬೆಲೆ ದೊಡ್ಡದು.. ಅವನನ್ನ ಪ್ರೀತಿಸುವ ನನ್ನ ಬೆಲೆ ಅವನಿಗಿಂತ ದೊಡ್ಡದು.. ಹೆಚ್ಚಿಗೆ ಸತಾಯಿಸಿದೆಯೋ ಹಪ್ಪಳ ಒಣಗಿಸಲು ಕೂರಿಸುತ್ತೇನೆ ಅನ್ನುವ ಭಾವವೂ ಎಲ್ಲವೂ ಆ ಹೆಣ್ಮನಸಿನ  ಪ್ರೀತಿಯನ್ನ ಅದೆಷ್ಟು ಎತ್ತರಕ್ಕೇರಿಸಿ ತೋರಿಸುತ್ತವೆ.

* ಬೆರಣಿ ತಟ್ಟುವ ಹುಡುಗಿ ಹುಡುಕುವ ಮುರುಕು ಚಂದಿರನ ಚೂರುಗಳು. 

ಹೀಗೆ ಕಾಡುವ ಅದೆಷ್ಟು ಸನ್ನಿವೇಶಗಳು. ಗೀಚುತ್ತಾ ಹೋದರೆ ಅಷ್ಟೂ ಸನ್ನಿವೇಶಗಳ ಕುರಿತಾಗಿ ಗೀಚಬಹುದು. ಮಧುರ ಸಂಗೀತ ಸಂಯೋಜನೆ.. ವಾದ್ಯ ಸಂಯೋಜನೆ.. ಕೋರೈಸುವ ಬೆಳಕು.. ಸುಂದರ ವ್ಯಾನಿಟಿ ಬ್ಯಾಗಿನ ಹಿನ್ನಲೆಯುಳ್ಳ ಈ ನಾಟಕ ಬಹುಕಾಲ ನೆನಪಿನಲ್ಲಿ ಉಳಿಯುವಂಥಾಯ್ತು. 

ಬಹಳ ಕಾಲದ ನಂತರ ಹೀಗೊಂದು ನಾಟಕವನ್ನ ನೋಡಿದ್ದು. ಅಕ್ಷರ ಸಹ ಒಂದು ಗಂಟೆಯಷ್ಟು ಕಾಲ ನನ್ನನ್ನೇ ಕಳೆದು ಹಾಕಿತ್ತು ಲೋಕದ ಪರಿಮಿತಿಯಿಂದ. ಸರಿಯಾಗಿ ಹತ್ತು ವರ್ಷದ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನೋಡಿದ್ದು ನಾಟಕವನ್ನ. ಅದೇನು ಹೇಳಿದರೂ ಸಿನಿಮಾಗಳಿಗಿಂತ ನಾಟಕ ಮನ ಮುಟ್ಟುವ ಪರಿ ಭಿನ್ನ ಮತ್ತು ಅತಿ ಆಪ್ತ ಅನ್ನುವುದು ಸತ್ಯ. ಅಷ್ಟು ಚೆಂದದ ಹುಡುಗಿಯರು.. ಎಲ್ಲರ ಹೆಸರನ್ನೂ ಜ್ಞಾಪ ಇಟ್ಟುಕೊಳ್ಳಲಾಗಲಿಲ್ಲವಲ್ಲ ಅನ್ನೋ ಕೊರಗಿದೆ.. ಆದರು ಒಂದು ಹುಡುಗಿಯ ಹೆಸರು ತುಂಬಾ ಚೆನ್ನಾಗಿ ನೆನಪಿದೆ ಆದರೆ ಹೇಳಲಾರೆ. ಮದುಮಗನ ರೂಪದಲ್ಲಿ ನಮ್ಮ ನಾಗರಾಜ್ ಸೋಮಯಾಜಿ ಸೂಪರ್.. ಶಿವನ ವೇಷಧಾರಿಯೂ ಇಷ್ಟವಾದರು.. ಅವರ ಶಾರೀರ ಕೂಡಾ ಅಷ್ಟೇ ಮೋಹಕ. ನಿರ್ದೇಶಿಸಿರುವ ಮಂಗಳ ಮೇಡಂ ಅವರಿಗೊಂದು ಅಭಿನಂದನೆ ಹೇಳಲೇಬೇಕು. ನಾಟಕ ಅದೆಷ್ಟು ಸಮ್ಮೋಹಿಸಿತ್ತು ಅಂದ್ರೆ ನಂ ಹತ್ರ ಮೊಬೈಲ್ ಇರೋದು ಕೂಡಾ ಮರೆತು ಹೋಗಿ ಒಂದೆರಡು ಫೋಟೋಗಳನ್ನಾದ್ರು ತೆಗೆದು ಕೊಳ್ಳಬೇಕಿತ್ತು ಅನ್ನುವ ಕನಿಷ್ಠ ಜ್ಞಾನವೂ ಮಲಗಿ ಬಿಟ್ಟಿತ್ತು.

ಒಟ್ಟಾರೆ ಒಂದು ಸುಂದರ ಸಂಜೆ.. ಒಂದಷ್ಟು ಸುಂದರ ವ್ಯಕ್ತಿತ್ವಗಳ ಜೊತೆ. ನಾಟಕಕ್ಕೆ ಕರೆ ನೀಡಿದ ರೂಪ ಮೇಡಂ.. ಜತೆಗೂಡಿ ನಾಟಕ ಮತ್ತಷ್ಟೂ ಆಪ್ತವಾಗುವಂತ ಕೆಲವು ವಿಚಾರಗಳನ್ನ ತಿಳಿಸಿಕೊಟ್ಟ ಕುಮುದಕ್ಕ.. ಕರೆದ ಒಡನೆ ಜೊತೆಗೆ ಬಂದ ಮಹೇಶಣ್ಣ.. ಕೆಲವು ಸಂವೇದನೆಗಳನ್ನ ಆಪ್ತವಾಗಿ ಮನವರಿಕೆ ಮಾಡಿಕೊಟ್ಟ ಕಿರಣ್ ವಟಿ.. ಮೊದಲ ಭೇಟಿಯಲ್ಲೇ ಹುಷಾರ್ ಹುಡುಗಿ ಇದು ಅನ್ನಿಸಿದ ಶ್ರೀದೇವಿ.. ಅವರ ಗೆಳತಿ ರಮ್ಯಶ್ರೀ.. ಹೊಸ ಪರಿಚಯ ದತ್ತರಾಜು.. ಫೇಸ್ಬುಕ್ ನಲ್ಲಿ ಅದಾಗಲೇ ನೋಡಿದ್ದರೂ ಪ್ರತಕ್ಷವಾಗಿ ಕೆಲವರನ್ನ ನೋಡಿದಂತಾಗಿದ್ದು.. ಬಿಸಿ ಬಿಸಿ ಕಾಫಿ ವಿಥ್ ಮಂಗಳೂರು ಬೋಂಡ. ಒಂದು ಸಾರ್ಥಕ ಬುಧವಾರದ ಸಂಜೆ ನಿನ್ನೆಯದ್ದು.

ಮಿಸ್ ಮಾಡಿಕೊಂಡವರು ಖಂಡಿತ ಕೆಲವೊಂದು ಸಂಭ್ರಮಗಳನ್ನ ಸಂತಸಗಳನ್ನ ಮಿಸ್ ಮಾಡಿಕೊಂಡದ್ದು ನಿಜ. ಮತ್ತೊಮ್ಮೆ ಈ ನಾಟಕ ಎಲ್ಲಿಯಾದರೂ ಆಯೋಜಿಸಿದ್ದಾದರೆ ಖಂಡಿತ ಬಿಡಬೇಡಿ ಅನ್ನುವ ಕಿವಿಮಾತು ನನ್ನದು. 

ಚಿತ್ರ ಕೃಪೆ: ಕುಮುದಕ್ಕ